Wednesday, February 1, 2017

ಅಪ್ಪನ ಮೇರುವ್ಯಕ್ತಿತ್ವವನ್ನು ನಿಮಗೆ ಪರಿಚಯಿಸುವ ಹಂಬಲ....


ಅಪ್ಪ ಹೀಗೆ.....
ಪತ್ರಿಕೆಯಲ್ಲಿ ಸುದ್ದಿಯ ಜೊತೆ ಒಡನಾಡುತ್ತಿದ್ದ ಅಪ್ಪ ವಾಸ್ತವದಲ್ಲೂ ಜನರ ಸ್ಥಿತಿಗತಿಗಳಿಗೆ, ಭಾವನೆಗಳಿಗೆ ತೀಕ್ಷ್ಣವಾಗಿ ಸ್ಪಂದಿಸುತ್ತಿದ್ದರು.  ಯಾರೇ ಜೀವನದಲ್ಲಿ ನೊಂದಿದ್ದರೂ ಅವರಿಗೊಂದು ಸಮಾಧಾನದ ಮಾತು ಆಡಿ ಅವರಿಗಾಗುವಷ್ಟು ಸಹಾಯವನ್ನು ಮಾಡುವುದು ನಾವು ಚಿಕ್ಕವರಾಗಿದ್ದಾಗಿನಿಂದ ನೋಡಿದ್ದೇವೆ.
ಮನುಷ್ಯರಲ್ಲಿ ಯಾವುದೇ ಭೇದ ಅವರಿಗೆ ಕಾಣುತ್ತಿರಲಿಲ್ಲ. ಪರಿಚಿತ, ಅಪರಿಚಿತರನ್ನು ಎಷ್ಟೋ ವರ್ಷಗಳಿಂದ ತಮ್ಮ ಬಂಧುವಾಗಿದ್ದವರಂತೆ ಮಾತನಾಡಿಸಿ ಅವರ ಕಷ್ಟಸುಖಗಳನ್ನು ಚರ್ಚಿಸಿ, ಅವರ ಜೊತೆ ಕಾಫಿ ಕುಡಿದು ವಿದ್ಯಾರ್ಥಿ ಭವನದ ದೋಸೆಗೆ ಆಮಂತ್ರಣ ನೀಡುವುದು ಅಪ್ಪನ ವೈಷಿಷ್ಟ್ಯತೆ. ಜನರನ್ನು ತಿಳಿದುಕೊಳ್ಳುವುದು ಅವರಿಗೆ ಬಹಳ ಖುಷಿ ಕೊಡುತ್ತಿತ್ತು.  ಯಾವುದೇ ಆಟೋ ಹಿಡಿಯಲಿ ಜೇಬಿನಲ್ಲಿ ಹಣವಿದ್ದರೆ ಆಟೋ ಚಾಲಕನನ್ನು ತಿಂಡಿಗೆ ಕರೆದೊಯ್ಯುವುದು ಅಥವಾ ಮನೆಯ ಹತ್ತಿರ ಬಂದಿಳಿದೊಡನೆ ಆತನನ್ನು ಮನೆಗೆ ಕರೆದು ಕಾಫಿ ಕೊಡುವುದು ಮನೆಯಲ್ಲಿ ಕಾಣುವÀ ಸಾಮಾನ್ಯ ದೃಶ್ಯ.   ಮಹಾತ್ಮ ಗಾಂಧಿ ರಸ್ತೆಯಲ್ಲಿ ತಮ್ಮ ಕಚೇರಿಯ ಎದುರು ಕಡಲೆಕಾಯಿ ಮರುವವನಿಂದ ಹಿಡಿದು ರಸ್ತೆಯ ಬದಿ ಸ್ವಚ್ಛ ಮಾಡುವವರು ಇವರಿಗೆ ಬೇಕಾದವರು.  ತಮಗೆ ಬರುವ ಇನ್ನೂರು ರೂಪಾಯಿ ಸಂಬಳದಲ್ಲಿ ನೂರನ್ನು ಕಡಲೆಕಾಯಿ ಮಾರುವವನ ಕೈಗಿತ್ತು ಇನ್ನು ಮುಂದೆ ನಿನ್ನ ವ್ಯಾಪಾರವನ್ನು ಹೆಚ್ಚಿಸಿ ಕೊಳ್ಳಲು ನೀನೊಂದು ತಳ್ಳುವ ಗಾಡಿಯನ್ನು ತೆಗೆದುಕೋ ಎಂದಿದ್ದರಂತೆ. ನಾವು ನೋಡಿದ್ದು ನಮ್ಮ ಮನೆ ತುಂಬ ಜನ. ಹಾಲು ಕೊಡುವವನು ಬರಲಿ, ತರಕಾರಿ ಮಾರುವವನು ಬರಲಿ, ಭಿಕ್ಷುಕನೇ ಬರಲಿ, ಅವರ ಜೊತೆ ಕಾಫಿ ಕುಡಿದು ಅವರ ಜೇವನವನ್ನು ಅರಿಯುವ ಪ್ರಯತ್ನವನ್ನು ಮಾಡಿ ಅವರಿಗೆ ತತ್ವಗಳನ್ನು ಹೇಳುತ್ತಿದ್ದರು ಅಪ್ಪ.
ಯಾವಾಗಲೂ ಎಲ್ಲರ ಬಗ್ಗೆ ಒಳ್ಳೆಯ ಮಾತು, ಹಾಸ್ಯ ಒಂದಿಷ್ಟು ವ್ಯಂಗ್ಯ ಬೆರೆತು ನೇರವಾದ ಪ್ರೀತಿ ತೋರುತ್ತಿದ್ದರು. ಎಲ್ಲರೊಂದಿಗೂ ಜೀವನ ಎಷ್ಟು ಸುಂದರವಾಗಿದೆ ಅದನ್ನು ತಾನು ಸವಿಯುತ್ತಿರುವ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅವರ ಮಾತಿನ ಧಾಟಿಯಲ್ಲೇ ಅವರು ಎಲ್ಲರಲ್ಲಿ ಉತ್ಸಾಹ ತುಂಬಿ ಸಂತೋಷ ಮೂಡಿಸುತ್ತಿದ್ದರು. ಅವರ ಮಾತಿನಲ್ಲಿ ವಯಸ್ಸಿನ ಅಥವಾ ಅನಾರೋಗ್ಯದ ಯಾವ ಛಾಯೆಯೂ ಇರಲಿಲ್ಲ. ಅವರ ದೇಹಕ್ಕೆ ಮಾತ್ರ ವಯಸ್ಸಾಗಿತ್ತು, ಮನಸ್ಸಿನಲ್ಲಿ ಅವರು ಮಕ್ಕಳೊಂದಿಗೆ ಮಗುವಾಗಿ, ತರುಣರ ಜೊತೆ ತರುಣನಾಗಿ, ಸ್ನೇಹಿತರ ಜೊತೆ ಸ್ನೇಹಿತನಾಗಿ, ಪ್ರಬುದ್ಧರೊಡನೆ ಪ್ರಬುದ್ಧನಾಗಿ ವರ್ತಿಸುತ್ತಿದುದು ಒಂದು ರೀತಿ ಆಶ್ಚರ್ಯವನ್ನು ತರುತ್ತಿತ್ತು. ಯಾವ ಕ್ಷಣದಲ್ಲಿಯಾದರೂ ಅವರಿಗೆ ಹಿಂದಿನದಾಗಲೀ ಮುಂದಿನದಾಗಲೀ ಚಿಂತೆಯಿರಲಿಲ್ಲ, ಮನಸ್ಸಿನಲ್ಲಿ ಯಾವ ಭಾರವೂ ಇಲ್ಲದೆ ಯಾವಾಗಲೂ ನಗುತ್ತಾ ಇರುವುದು ಅಪ್ಪನ ವಿಶೇಷ ಗುಣ.
ಅಪ್ಪನ ಕನ್ನಡ ಪ್ರೇಮ
ಕನ್ನಡದ ಪರಮ ಅಭಿಮಾನಿಯಾಗಿದ್ದ ಅಪ್ಪ ಕನ್ನಡವನ್ನು ಶುದ್ಧವಾಗಿ, ಪ್ರಬುದ್ಧವಾಗಿ ಮತ್ತು ಸುಲಲಿತವಾಗಿ ಬಳಸುತ್ತಿದ್ದರು.   ಅವರ ಕವನಗಳಲ್ಲಿ ಹಳೆಗನ್ನಡದ ಪದಗಳು ಹಾಸುಹೊಕ್ಕಾಗಿದ್ದವು. ಅದೆಷ್ಟೋ ಉದ್ಯಮಗಳಿಗೆ ಕನ್ನಡದ ಆಕರ್ಷಕ ಶೀರ್ಷಿಕೆಗಳನ್ನು ಕೊಡುತ್ತಿದ್ದರು.  ಪತ್ರಿಕಾ ಜೀವನಕ್ಕೆ ಕಾಲಿಡುವ ಮುಂಚೆ ಮುಂಬೈನ ಲಿಂಟಾಸ್ ಕಂಪನಿಯಲ್ಲಿ ಕನ್ನಡದ ಕಾಪಿರೈಟರ್ ಅಗಿ ಕೆಲಸ ನಿರ್ವಹಿಸಿದ್ದರಂತೆ. 1960-62ರಲ್ಲಿ ಹೊರಬಂದಿದ್ದ ಕನ್ನಡ ಜಾಹಿರಾತುಗಳಿಗೆ ತಮ್ಮ ವಿಭಿನ್ನ ಶೈಲಿಯ ಶಿರ್ಷಿಕೆಗಳನ್ನು ನೀಡಿದ್ದರು.  ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿ ಶೀರ್ಷಿಕೆಗಳನ್ನು ನೋಡಿ ಅನೇಕರು ಇದುನಾಭೂಅವರ ಶೀರ್ಷಿಕೆ ಎಂದೇ ಗುರುತಿಸುತ್ತಿದ್ದರು. (ಅಪ್ಪ ಹೆಸರಿನಲ್ಲೇ ಪತ್ರಿಕೋದ್ಯಮದಲ್ಲಿ ಪ್ರಚಲಿತರು)
ಬಸ್ಸುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಬಿಟ್ಟು ಇತರ ಭಾಷೆಗಳಲ್ಲಿ ಮಾತನಾಡಿದರೆ ಅವರ ಬಳಿ ಹೋಗಿ ಕನ್ನಡದಲ್ಲಿ ಮಾತನಾಡಿ ಎಂದು ವಿನಂತಿಸಿಕೊಳ್ಳುತ್ತಿದ್ದರು.  ಎಷ್ಟೋ ಸಾರಿ ಇದು ಅತಿರೇಕವಾಗಿ ಅನ್ಯಭಾಷಿಗರೊಡನೆ ಜಗಳವಾಡಿಕೊಂಡು ಮನೆಗೆ ಬಂದದ್ದುಂಟು. ಕನ್ನಡ ಬೋರ್ಡ್ ಬಳಕೆಗಾಗಿ ವಿಧಾನಸೌಧದ ಮುಂದೆ ಕುಳಿತು ಬೂಟ್ ಪಾಲೀಷ್ ಚಳುವಳಿಯಲ್ಲಿ ಭಾಗವಹಿಸಿದ್ದರಂತೆ. ಇಂದಿಗೂ ಈಚತ್ರಗಳು ನಮ್ಮ ಮನೆಯಲ್ಲಿದೆ.
ನಮ್ಮ ಜೊತೆ ಅವರ ಕಾಲೇಜು ದಿನಗಳ ಕತೆಗಳನ್ನು ಹಂಚಿಕೊಳ್ಳುತ್ತಿದ್ದರು. ಕಾಲೇಜಿನಲ್ಲಿದ್ದಾಗಲಿಂದಲೇ ಅಪ್ಪನಿಗೆ ಕನ್ನಡದ ನಂಟು.  ಬಿಎಸ್ಸಿ ಪದವಿ ಓದುತ್ತಿದ್ದ ಇವರಿಗೆ, ಜಿ. ಪಿ. ರಾಜರತ್ನಂ, ಅನಕೃ, ವಿಸೀ, ಅಡಿಗರ ಜೊತೆ ಒಡನಾಟವಿತ್ತು.  ಇವರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಹಿರಿಯ ಸಾಹಿತಿಗಳನ್ನು ಗೌರವಿಸಿದ್ದರಂತೆ. ವಿಸೀ, ಅನಾಕೃ ಅವರ ಸನ್ಮಾನದ ಚಿತ್ರಗಳನ್ನು ಹಾಗೇ ಕಾಪಾಡಿದ್ದಾರೆ. ಲಂಕೇಶ, ನಿಸ್ಸಾರ್ ಅಹಮದ್, ನಮ್ಮ ಚಿಕ್ಕಪ್ಪ ಸೀತಾರಾಮ್ ಅನೇಕ ಸಾಹಿತಿಗಳ ಜೊತೆಗೂಡಿ ಸೆಂಟ್ರಲ್ ಕಾಲೇಜಿನ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯಯಾಗಿದ್ದರು. ವಿದ್ಯಾರ್ಥಿ ದಿನಗಳಲ್ಲೇ ಆಕಾಶವಾಣಿಗೆ ಬರೆದ ಬಾನುಲಿ ನಾಟಕಗಳು ಪ್ರಸಾರವಾಗಿತ್ತು. ಇವರ ನಾಟಕಗಳನ್ನು ಮೆಚ್ಚಿ ಜಿ. ಪಿ. ರಾಜರತ್ನಂ ಪತ್ರ ಬರೆದು ಶ್ಲಾಘಿಸಿದ್ದರು.  ನೀನು ಬಿಎಸ್ಸಿ ಮಾಡಿ ಏನು ಮಾಡುವುದಿದೆ, ನಿನಗಾಗಿ ಕನ್ನಡ ಲೋಕ ಕೈಬೀಸಿ ಕರೆಯುತ್ತಿದೆಎಂದಿದ್ದರಂತೆ. ಅವರ ಮಾತನ್ನೇ ಅಕ್ಷರಶಃ ಪಾಲಿಸಲು ಮುಂದಾಗಿ ಕನ್ನಡದ ಬರಹಗಾರರಾಗಿ ಗುರುತಿಸಿಕೊಂಡರು. ವಿದೇಶಿಯರಿಗೆ ಕನ್ನಡ ಹೇಳಿಕೊಡುವ ಕೆಲಸದಲ್ಲಿ ಹಲವಾರು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಅಪ್ಪ ಅಮೆರಿಕನ್ ಪೀಸ್ ಕೋರ್ಗಾಗಿ ಕನ್ನಡ ಕಲಿಕಾ ಕ್ರಮ ಹಾಗು ಅದಕ್ಕೆ ಬೇಕಾದ ಕಲಿಕಾ ಪಾಠಗಳನ್ನು ತಯಾರಿಸಿದ್ದರು.
ಅಪ್ಪನ ಕನ್ನಡದ ಉಚ್ಛಾರಣೆ ಬಹಳ ಸ್ಫುಟವಾಗಿತ್ತು ಹಾಗು ಧ್ವನಿಯ ಶಾರೀರ ಚೆನ್ನಾಗಿದ್ದ  ಕಾರಣ ಬಾನುಲಿ ನಾಟಕಗಳಿಗೆ ಧ್ವನಿ ನೀಡಿದ್ದರು ಹಾಗೇ ಆಕಾಶವಾಣಿಯಲ್ಲಿ ಕಮೀಷನ್ ವರದಿಗಳನ್ನು ಪ್ರಸ್ತುತಪಡಿಸುತ್ತಿದ್ದರು.  ಸಿನಿಮಾ ರಂಗವನ್ನು ಪ್ರವೇಶಿಸಿದ ಇವರು,  ಐದು ಚಲನಚಿತ್ರಗಳಿಗೆ ಸಂಭಾಷಣೆ ಬರೆದು ಸಹನಿರ್ದೇಶನವನ್ನು ಮಾಡಿ ತಮ್ಮಗಿದ್ದ ಕನಸುಗಳನ್ನು ಸಾಕಾರ ಮಾಡಿಕೊಂಡಿದ್ದರು. ಕೆಲವು ಚಲನಚಿತ್ರಗಳಲ್ಲಿ ನಟಿಸಿದರು ಕೂಡ.  ಎಷ್ಟೋ ವೇಳೆ ಮೇಕಪ್ನಲ್ಲೇ ತಮ್ಮ ಕಚೇರಿಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಅವರ ಗೆಳೆಯರಾಗಿದ್ದ ಪಿ. ಲಂಕೇಶ್, ‘ಪ್ರಜಾವಾಣಿಯಲ್ಲಿ ಟಿಪ್ಪೂ ಸುಲ್ತಾನ್ಎಂಬ ಶೀರ್ಷಿಕೆಯಲ್ಲಿ ಒಂದು ವ್ಯಂಗ್ಯ ಲೇಖನವನ್ನು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. 

ಪದಗಳ ಪದರಗಳಲ್ಲಿ.........
ಪದಪರ್ವತಾರೋಹದಲ್ಲಿ ತೇನ್ ಸಿಂಗ್ನಾದ ಈತನ ಸಾಧನೆಯನ್ನು ಸರಿಗಟ್ಟುವವರು ಕರ್ನಾಟಕದಲ್ಲೇ ಇಲ್ಲಎಂದು ಸಾಹಿಗಳಾದ .ರಾ. ಮಿತ್ರ ಬರೆದಿದ್ದಾರೆ. ಕನ್ನಡಕ್ಕಾಗಿ ಅಪ್ಪನ ಬಹು ದೊಡ್ಡ ಕೊಡುಗೆಯೆಂದರೆ ಕನ್ನಡದಲ್ಲಿ ಪದಬಂಧವನ್ನು ನಲವತ್ತು ವರ್ಷಗಳ ಕಾಲ ರಚಿಸಿದ್ದಾರೆ. ಇದಕ್ಕೆ ಅವರಿಗೆಪದರಂಗ ಪಿತಾಮಹ’ ‘ಶಬ್ದಬ್ರಹ್ಮಎಂಬ ಬಿರುದುಗಳೂ ಸಿಕ್ಕಿವೆ.  ಪದಬಂಧ ರಚನೆಯಲ್ಲಿ ಅಪ್ಪ ನಿಪುಣರು.  ಅವರ ರಚನೆಯ ಶೈಲಿಯನ್ನು ಮೆಚ್ಚಿದ್ದ ಅಭಿಮಾನಿಗಳ ಮಹಾಪೂರವೇ ಇತ್ತು.  ಅನೇಕ ಅಭಿಮಾನಿಗಳು ಪತ್ರ ಮುಖೇನ ಅವರೊಂದಿಗೆ ಪದಗಳ ಬಗ್ಗೆ ವಿಷ್ಲೇಷಣೆ ನಡೆಸುತ್ತಿದ್ದರು.  ಪದಬಂಧಗಳಲ್ಲಿ ಹಲವಾರು ಕನ್ನಡ ಗ್ರಂಥಗಳ ಉಲ್ಲೇಖವಿರುತಿತ್ತು.  ಹರಿಹರನ ರಗಳೆ, ಕುಮಾರ ಭಾರತ, ರಾಮಾಯಣ ದರ್ಶನಂ, ಸಿರಿಭೂವಲಯ, ಗಳಗನಾಥ ಕಾದಂಬರಿ, ಗಧಾಯುದ್ಧ ಹೀಗೆ ಪದಬಂಧಗಳಲ್ಲಿ ಇವುಗಳ ಬಳಕೆಯಿದೆ.  ಒಮ್ಮೆ ಅವರನ್ನು ನಿಮಗೆ ಪುಸ್ತಕಗಳ ಬಗ್ಗೆ ಹೇಗೆ ಇಷ್ಟು ಆಳವಾಗಿ ತಿಳಿದಿದೆ ಎಂದು ಪ್ರಶ್ನಿಸಿದಕ್ಕೆ ಅವರು ಹಲವಾರು ಸನ್ನಿವೇಶಗಳ ಪದ್ಯಗಳನ್ನು ಹಾಡತೊಡಗಿದರು. ರಾಮಾಯಣದಲ್ಲಿ ಮಂಥರೆಯ ಪ್ರವೇಶವನ್ನು ಕಾವ್ಯರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದರು. ಅವರ ಧ್ವನಿಯಲ್ಲಿ ಹಾಡುತ್ತಿದ್ದು ಈಗಲೂ ಕಿವಿಯಲ್ಲೇ ಇದೆ. ಅವರಿಗೆ ಇಷ್ಟು ವಿಷಯಗಳು ಹೇಗೆ ನೆನಪಿನಲ್ಲಿ ಉಳಿದಿತ್ತೋ ತಿಳಿಯದು.  ಇವರು ಹಲವಾರು ಪುಸ್ತಕಗಳನ್ನು ಓದಿ ಅದನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ ಎಂದು ತಿಳಿದು ಅಚ್ಚರಿಯಾಯಿತು.  ಇವರದು ಕೇವಲ ತಿಳುವಳಿಕೆಯಲ್ಲ, ಹೊರತಾಗಿ ಆಳವಾದ ಪಾಂಡಿತ್ಯವೆಂದು ಅರಿವಾಯಿತು.  ಪದಬಂಧದ ಸುಳಿವುಗಳನ್ನು ಸೃಜನಾತಕವಾಗಿ ಯೋಚಿಸಿ ರಚಿಸುತ್ತಿದ್ದದ್ದು ಜ್ಞಾನದಿಂದಲೇ. ಅವರ ರಚನಾ ಕೌಶಲ್ಯ ಎಷ್ಟಿತ್ತೆಂದರೆ ಪದ ಹೇಳಿದ ಕೂಡಲೇ ಅದಕ್ಕೆ ಒಂದು ಒಗಟಿನಂತಹ ಸುಳಿವನ್ನು ನೀಡುತ್ತಿದ್ದರು. ಒಂದು ಪದಬಂಧಕ್ಕೆ ಅವರಿಗೆ ಹೆಚ್ಚು ಸಮಯವೇ ಬೇಕಾಗಿರಲಿಲ್ಲ. ಹಾಕಿದ ಎಲ್ಲಾ ಪದಗಳಿಗೂ ಅರ್ಧ ಗಂಟೆಯಲ್ಲಿ ಸುಳಿವುಗಳನ್ನು ಬರೆದುಬಿಡುತ್ತಿದ್ದರು.  ಅವರನ್ನು ಜಾಗೃತವಾಗಿ ಇಡುತ್ತಿದ್ದ ಒಂದೇ ಒಂದು ಕೆಲಸವೆಂದರೆ ಪದಬಂಧ.  1997 ರಲ್ಲಿ ಅವರಿಗೆ ಪಾಶ್ರ್ವವಾಯುವಾಗಿ ಮೊದಲ ಸಲ ಆಸ್ಪತ್ರೆಗೆ ದಾಖಲಾಗಿದ್ದರು. ಎಚ್ಚರವೇ ಇಲ್ಲದಿದ್ದವರು, ಪ್ರಜ್ಞೆ ಬಂದ ಕೂಡಲೇ ಹೇಳಿದ ಮಾತುಪ್ರಜಾವಾಣಿಗೆ ಪದರಂಗವನ್ನು ಕಳಿಸಬೇಕುಎಂಬುದು.  ಅವರಿಗೆ ಯಾವಾಗಲೂ ಕರ್ತವ್ಯಪ್ರಙÉ್ಞ ಕಾಡುತ್ತಿತ್ತು. ಇದಾದ ನಂತರ ಎಷ್ಟೋ ಸಲ ಅಪ್ಪ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರೂ ಪದರಂಗವನ್ನು ರಚಿಸುವ ಕಾರ್ಯವನ್ನು ಒಂದು ವಾರವೂ ನಿಲ್ಲಿಸದೆ ನಿರಂತರವಾಗಿ ನಡೆಸುಕೊಂಡು ಬಂದಿದ್ದರು.  ಅವರು ಇಹಲೋಕವನ್ನು ತ್ಯಜಿಸಿದ ದಿನವೂ ಮುಂಬರುವ ವಾರ ಪ್ರಕಟವಾಗುವ ಪದಬಂಧವನ್ನು ರಚಿಸಿ ಪ್ರಜಾವಾಣಿಗೆ ಕಳುಹಿಸಿದ್ದರು. 
ಇವರ ರಚನೆಯ ಪದಬಂಧದಲ್ಲಿ ಮತ್ತೊಂದು ವಿಶೇಷತೆ ಇತ್ತು.  ಎಷ್ಟೋ ಪದಗಳನ್ನು ಮತ್ತೆ ಮತ್ತೆ ಬಳಸಿದ್ದರೂ ಸುಳಿವುಗಳು ಮಾತ್ರ ಬಹಳ ವೈವಿಧ್ಯಮಯವಾಗಿರುತ್ತಿತ್ತು.  1999ರಲ್ಲಿ ಇವರು ಎಲ್ಲಾ ಬಳಸಿದ ಪದಗಳು ಹಾಗು ಅವುಗಳಿಗೆ ನೀಡಿದ ಸುಳಿವುಗಳನ್ನು ಒಂದು ಪುಸ್ತಕ ರೂಪದಲ್ಲಿ ತರಬೇಕೆಂದು ಒಟ್ಟಾಗಿ ಸೇರಿಸಿದ್ದರು.  ವರ್ಷದ ವೇಳೆಗೆ ಅವರು ಬಳಸಿದ್ದ ಪದಗಳ ಸಂಖ್ಯೆ 28000 ಮುಟ್ಟಿತ್ತು.  ಇಷ್ಟೂ ಪದಗಳ ಸುಳಿವುಗಳು ಭಿನ್ನವಾಗಿವೆ, ಹೊಸತಾಗಿದೆ.  ಇದಾದ ನಂತರ ಇನ್ನು 17ವರ್ಷಗಳ ಕಾಲ ಪದಬಂಧವನ್ನು ರಚಿಸುತ್ತಲೇ  ಬಂದಿದ್ದಾರೆ. ಇವುಗಳ ಪದಗಳನ್ನು ಸೇರಿಸಿದರೆ 40000 ಸಾವಿರಕ್ಕೂ ಹೆಚ್ಚು ಪದಗಳಾÀಗುತ್ತವೆÉ. ಇವರು ಮಾಡಿರುವುದು ಎಂತಹ ಅಗಾಧ ಕೆಲಸವೆಂಬುದು ನಮಗೆ ಅರಿವಾಗುತ್ತದೆ. ಇದಲ್ಲದೆ ದಿನಪದ, ವಿಜಯಪದ, ವನಿತಾಪದ ಮುಂತಾದ ಪದಬಂಧಗಳನ್ನು ಹಲವು ವರ್ಷಗಳ ಕಾಲ ರಚಿಸಿದ್ದರು.
ನಾಗಲೋಚನ ನುಡಿವಚನ ಪ್ರಯತ್ನ
ನಾಗಲೋಚನಅಪ್ಪನ ವಿಶೇಷ ಪ್ರಯತ್ನ. ತತ್ವದ ಬುನಾದಿಯ ಮೇಲೆ ಹೆಣೆದಿರುವ ಪದ್ಯ ಸಂಗ್ರಹ ಪಂಚಪದಿಯಲ್ಲಿದೆ.  ಅವರಿಗಿದ್ದ ಅನಂತ ಜ್ಞಾನವನ್ನು ಇದರಲ್ಲಿ ಹೊರಗಿಟ್ಟದ್ದಾರೆ. ನಾಗಲೋಚನನೊಬ್ಬ ಕರ್ಮ, ಮರ್ಮ, ಧರ್ಮಗಳ ಹೆಸರಿನಲ್ಲಿ ನಡೆಯುವ ಕೌತುಕಗಳ ಮಧ್ಯೆ ನಲುಗಿ ಜೀವನ ಸತ್ಯಗಳನ್ನು ಅರಸಲು ಹೊರಟಿರುವ ಸಾಮಾನ್ಯ ಜೀವಿ ಎಂದಿದ್ದಾರೆ. ನಾಗಲೋಚನ ಸಂಪೂರ್ಣವಾಗಿ ಒಂದು ಜೀವನ ಹಾಗು ವಿಶ್ವರಹಸ್ಯ ಶೋಧನೆಯ ಪ್ರಯತ್ನವಾಗಿದೆ. ಒಂದೊಂದು ನುಡಿವಚನವೂ ಮಾರ್ಮಿಕವಾಗಿದ್ದು, ಪದಗಳ ಬಳಕೆ ಬಹಳ ಸೂಕ್ಷ್ಮವಾಗಿದೆ. ಅವರೇ ಹೇಳಿಕೊಂಡಂತೆವಿಧಿಯ ತಂತ್ರಕ್ಕೆ ತಲೆಯೊಡ್ಡಿದ ನಾನು ಸಮಸ್ಯೆಯ ಸುಳಿಯಲ್ಲಿದ್ದೆ.  ಜೀವನದಲ್ಲಿ ನಡೆದು ಬಂದದೆಲ್ಲಾ ಅಂಕು-ಡೊಂಕಿನ, ಏರಿಳಿತಗಳ, ಗೊತ್ತು ಗುರಿಯಿಲ್ಲದ ಹಾದಿ, ಎಂಥ ಪರಿಸ್ಥಿತಿಯಲ್ಲೂ ನಗುವ, ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ನನ್ನ ಮನಸ್ಸಿನಲ್ಲಿ ನಾಗಲೋಚನ ಹುಟ್ಟಿದ, ಕಣ್ತೆರೆಸಿದ,  ಅನುಭವವು ಅನುಭಾವವಾಗಿ, ಭವವು ಭಾವದ ಮಿಡಿತವಾಗಿ, ಕೊನೆಗೆ ಮನದ ದುಡಿಯಾಗಿ ನುಡಿದು ಬಂದದ್ದೇ ವಚನಗಳುಎಂದಿದ್ದಾರೆ.  ಪಂಚಪದಿಗಳನ್ನು ಹಲವು ಗಾಯಕ ಸೇಹಿತರು ಅನೇಕ ಸಂದರ್ಭಗಳಲ್ಲಿ ಹಾಡಿದ್ದಾರೆ.  ಮಾರ್ಮಿಕ ನುಡಿವಚನಗಳು ಹೆಚ್ಚು ಜನರನ್ನು ತಲುಪಬೇಕೆಂದು ಅಪ್ಪನ ಆಶಯ.
ನಿರಂತರ ಕಲಿಕೆ.......
ಅಪ್ಪನ ಜೀವನೋತ್ಸಾಹ ವೃತ್ತಿಯಲ್ಲಿ ಹೊಸಬರಿಗೆ ಪ್ರೇರಕವಾಗಿತ್ತು. ಯಾವಾಗಲೂ ಹೊಸ ಪ್ರಯೋಗಗಳನ್ನು ಮಾಡುವುದು ಇವರಿಗೆ ತೃಪ್ತಿ ತರುತಿತ್ತು.  ಪದಬಂಧದಲ್ಲಿ ಪ್ರಸ್ತುತ ಹಾಗು ಪ್ರಚಲಿತÀ ಪದಗಳ ಬಳಕೆ, ಸಮಗ್ರವಾಗಿ ಒಂದು ವಿಷಯದ ಬಗ್ಗೆ ಪದಬಂಧ ರಚಿಸುವ ಪ್ರಯತ್ನ, ಪರಭಾಷಾ ಪದಗಳ ಕನ್ನಡೀಕರಣ, ಹೀಗೆ ಪ್ರಯೋಗಗಳನ್ನು ಮಾಡುತ್ತಿದ್ದರು. ನಿವೃತ್ತಿಯ ನಂತರ ಹಲವು ಪತ್ರಿಕೆಗಳ ಪ್ರಕಾಶನದ ಪ್ರಯತ್ನವನ್ನು ಮಾಡಿದ್ದರು. ಟಿ.ವಿ. ಮಾಧ್ಯಮ ಬೆಳೆಯುವ ಮೊದಲೇ ಸಿನಿ-ಮಿನಿ ಸ್ಕ್ರೀನ್ ಎಂಬ ಮಾಸಿಕ ಪತ್ರಿಕೆ ಪ್ರಾರಂಭಿಸಿದ್ದರು.  ಇವರು ನಿವೃತ್ತಿಯ ನಂತರ ಕಂಪ್ಯೂಟರ್ ಕಲಿಕೆ ಪ್ರಾರಂಭಿಸಿ, ಅಂದಿನಿಂದ ಕೊನೆಯವರೆಗೂ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಪಡೆದು ಅವರದೇ ಆದ ವೆಬ್ಸೈಟ್ ಹೊಂದಿದ್ದರು. ಬ್ಲಾಗ್ ಬರೆಯುವ ಸಾಹಸಕ್ಕೂ ಕೈ ಹಾಕಿದ್ದರು. ಕನ್ನಡ ಕಾಮನಬಿಲ್ಲು ವೆಬ್ಸೈಟ್ಗಾಗಿ ಪದಬಂಧಗಳನ್ನು ರಚಿಸಿದ್ದರು. ಬ್ಲಾಗ್ ಹಾಗೂ ಫೇಸ್ಬುಕ್ನಲ್ಲಿ ಪ್ರತಿದಿನವೂ ಅವರ ಕವನಗಳನ್ನು, ಅವರ ಚಿಂತನೆಯನ್ನು ಹಂಚಿಕೊಳ್ಳುತ್ತಿದ್ದರು. 82 ಇಳಿವಯಸ್ಸಿನಲ್ಲಿ ಅವರ ಕಲಿಕಾ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.  ಅವರು ಇಹಲೋಕದ ಪ್ರಯಾಣ ಬೆಳೆಸುವ ಮೂರು ತಿಂಗಳ ಮೊದಲು ಅನಿಮೇಷನ್ ಕಲಿಯುವ ಪ್ರಯತ್ನದಲ್ಲಿ ತೊಡಗಿದ್ದರು.
ಅಪ್ಪನ ಊರು ಕೋಲಾರ, ಆದರೆ ಜನಿಸಿದ್ದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ಪ್ರಜಾವಾಣಿಯ ಸುದ್ದಿ ಸಂಪಾದಕರಾಗಿ 1991ರಲ್ಲಿ ನಿವೃತ್ತಿ ಪಡೆದರು.  ಪ್ರಜಾವಾಣಿಯಲ್ಲಿ ಭಾನುವಾರದಂದು ಪ್ರಕಟವಾಗುವ ಪ್ರತಿಷ್ಟಿತ ಪದರಂಗವನ್ನು ಸುಮಾರು 40 ವರ್ಷಗಳಿಂದ ರಚಿಸಿದ್ದಾರೆ.   ಒಬ್ಬ ಅಪರೂಪ ವ್ಯಕ್ತಿ. ಅಪ್ಪ ಹೇಳಿದಂತೆ ಇವರ ಜೀವನದೃಷ್ಟಿ ಪರ್ವತದಂತೆ ಉತ್ತುಂಗ, ಆನೆಯಂತೆ ನೇರ, ಹಾವಿನಂತೆ ವಕ್ರವಿದ್ದರೂ  ಜ್ಞಾನಿಯಂತೆ ಮರ್ಮಾನ್ವೇಷಕ.
ಅಪ್ಪ ರಚಿಸಿದ ನಾಗಲೋಚನದ ಮೂರು ನುಡಿ ವಚನಗಳು ಇಲ್ಲಿವೆ: 
ಜುಳುಜುಳಿಸುವ ತಳತಳನೆ ಥಳುಕಿ ಬಳುಕಿಸುವ
ದಡಗಳಪ್ಪುಗೆಯ ಬಿಸಿಯಲ್ಲಿ ಒಳಸುಳಿಯ
ಸುಳಿವು ನೀಡದೆ ಬೆಸೆದು ಬೆವರಿಳಿಸುವ ಬಂಡೆಗಳ
ಕಿಂಡಿಯಲ್ಲಿ ಭೋರ್ಗರೆದು ಬೆದರಿಸುವ ಜೀವನ
ಪ್ರವಾಹದ ಗತಿಗೇನು ನಿಯಮ ನಿರ್ಬಂಧ ನಾಗಲೋಚನ

ಆಳಿದವರ ಬಾಳಿದವರ ಅಳಿದುಳಿದು ಹೋದವರ
ಬಂದವರ ಬದುಕಿ ಸಂದವರ ದಬ್ಬಾಳಿಕೆಗಳಲಡಗಿ
ನಲುಗಿ ನೊಂದವರ ಹತಾಶೆ ಹರ್ಷಗಳಲಿ ಉಡುಗಿ
ಉಬ್ಬಿದವರ ಬಿಗಿಯುಸಿರು ಬೆರಗುಗಳಲಿ ಕುಗ್ಗಿ ಹಿಗ್ಗಿದವರ
ಭಾವನೆಗಳ ಬೃಹತ್ ಕೋಶವಾಯಿತೋ ವಿಶ್ವ ನಾಗಲೋಚನ

ಅಕ್ಷರಗಳಪದಗಳಿಂದ ತಿಳಿಯ ಹೇಳಿದನು ಪದಗಳ ಒಳಾರ್ಥ
ಸರಳಾರ್ಥ ಸಮಾನಾರ್ಥಗಳ ವಿಕಟಾರ್ಥ ವಿಪರೀತಾರ್ಥಗಳ
ನಾಗಬಂಧನ ವಾಕ್ಯಗಳನು ತಾನುಂಡು ಕಂಡ ಜೀವಿತಾರ್ಥವನು
ಲೋಕವಿರುವ ತನಕ ಉಳಿಯುವ ಅಮರ ತತ್ವಾರ್ಥಗಳನು
ತಾನಳಿದರೂ ಚಿರಂಜೀವನ ಸಾರ್ಥಕತೆಯನು ನಾಗಲೋಚನ