ಆ ನೀಲಿ ಹಕ್ಕಿಗೆ ಬಹಳ ಜಂಬ. ಅದೆಷ್ಟೋ ಕಾನನಗಳನ್ನು ದಾಟಿಬಂದಿದೆ, ಬಾನ ಬಯಲಲ್ಲಿ ಅದೆಷ್ಟೋ ಗಂಟೆಗಳು ಪಯಣಿಸಿದೆ. ಹೇಳಿಕೊಳ್ಳಲು ಈ ನೀಲಿ ಹಕ್ಕಿಗೆ ಅನೇಕ ಸಹಾಸ ಗಾಥೆಗಳು. ಯಾವುದೇ ಮರದ ಮೇಲೆ ಕೂತಾಗಲೂ ಇತರ ಹಕ್ಕಿಗಳು ಈ ನೀಲಿಹಕ್ಕಿಯನ್ನು ವಿಶೇಷವಾಗಿ ಗಮನಿಸುತ್ತಿದ್ದವು. ತಾನು ಸಾಧಾರಣವಾದ ಹಕ್ಕಿಯಲ್ಲವೆಂದು ಅದಕ್ಕೆ ತಿಳಿದಿತ್ತು. ನೋಡಲು ಗುಬ್ಬಿಯಷ್ಟು ಚಿಕ್ಕದಲ್ಲ, ಗಿಡುಗನಷ್ಟು ದೊಡ್ಡದಲ್ಲ. ಮಧ್ಯಮ ಗಾತ್ರ. ಅಂದವಾದ ಕೊಕ್ಕು, ಹೊಳೆಯುವ ಕಣ್ಣು. ಅದರ ರೆಕ್ಕೆಯ ಬಣ್ಣ ಬಹಳ ಆಕರ್ಷಕ. ಬಿಸಿಲು ಮೈಮೇಲೆ ಬಿದ್ದಾಗ ನೀಲಿಬಣ್ಣದ ಜೊತೆಯಲ್ಲಿ ಕಾಮನಬಿಲ್ಲಿನ ಎಲ್ಲಾ ರಂಗುಗಳೂ ಹೊಳೆಯುತ್ತಿದ್ದವು. ಮರದಕೊಂಬೆಯ ಮೇಲೆ ಕುಳಿತಾಗ ತನಗೆ ಬರುವ ಕೆಲ ಚಮತ್ಕಾರಗಳನ್ನೂ ಕುಶಲತೆಯನ್ನೂ ಪ್ರದರ್ಶಿಸುವುದು ಇದಕ್ಕೆ ವಾಡಿಕೆ. ಕೂಗಿನಲ್ಲೂ ಒಂದು ವಿಧವಾದ ವಿಭಿನ್ನತೆ ಇದೆ ಎಂಬುದನ್ನು ತಿಳಿದು ಧ್ವನಿ ಬದಲಿಸಿ ಕೂಗುವುದು, ಹಾಗೆ ಕೂಗುತ್ತಾ ಹಿಗ್ಗಿ ತನ್ನ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡುವುದು ಹಕ್ಕಿಗೆ ಅಭ್ಯಾಸ. ಆ ನೀಲಿ ಹಕ್ಕಿ ಎಷ್ಟೇ ಚಮತ್ಕಾರಗಳನ್ನು ಮಾಡಿದರೂ ಅದು ಕೇವಲ ಕೆಲವು ಕ್ಷಣಗಳು ಮಾತ್ರ. ಅದಾದ ನಂತರ ತಾನು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬ ಆಲೋಚನೆಯಲ್ಲಿ ಮುಳುಗುತಿತ್ತು. ತನ್ನ ಗುರಿಯೇ ಬೇರೆ. ತಾನು ನೀಲಿ ಆಕಾಶವನ್ನು ಮುಟ್ಟಬೇಕು, ಎತ್ತರಕ್ಕೆ ಹಾರಬೇಕು. ಮೇಲೇರಿದಾಗ ಅಲ್ಲಾಗುವ ಅನುಭವದಲ್ಲಿ ಕಳೆದು ಹೋಗಬೇಕೆಂದೆನಿಸುತ್ತಿತ್ತು. ಆದರೂ ಇತರ ದೊಡ್ಡ ಹಕ್ಕಿಗಳಷ್ಟು ಮೇಲೆ ಹಾರಲಾರೆನೆಂಬ ಅಳುಕು ಒಂದೆಡೆ ಇತ್ತು. ‘ನಾನು ಒಂದೇ ಕಡೆ ವಾಸ ಮಾಡುವ ಹಕ್ಕಿಯಲ್ಲ. ನನ್ನ ಸಾಮರ್ಥ್ಯಕ್ಕೆ ಸಾವಾಲೊಡ್ಡುವ ಹೊಸ ಹೊಸ ಜಗತ್ತಿನಲ್ಲಿ ಪಯಣಿಸಬೇಕು’ ಎಂಬ ಹೆಬ್ಬಯಕೆ ಆ ಹಕ್ಕಿಗಿತ್ತು. ಬೆಳಗಿನ ಝಾವದಲಿ ್ಲತಣ್ಣನೆಯ ಗಾಳಿಗೆ ಮೈಸೋಕಿಸುವ ಆಸೆ. ಸೂರ್ಯ ಉದಯಿಸುವ ಹೊತ್ತಿನಲ್ಲಿ ನದಿಯ ನೀರಿಗೆ ಬಂದು ರೆಕ್ಕೆಗಳನ್ನು ನೀರಿಗೆ ಬಡಿದು ಮತ್ತೆ ಮೇಲೆ ಹಾರುವುದು, ಮತ್ತೊಮ್ಮೆ ಬಂದು ನೀರು ಸ್ಪರ್ಷಿಸುವುದು ಒಂದು ರೀತಿಯ ಖುಷಿ ಕೊಡುತ್ತಿತ್ತು. ತನ್ನದೇ ಆದ ಪ್ರಪಂಚದಲ್ಲಿ ಪಯಣಿಸುತ್ತಾ ಆಗಾಗ್ಗೆ ಸಂತೋಷದಲ್ಲಿ ತೇಲುತ್ತಾ, ಒಮ್ಮೊಮ್ಮೆ ಮರದ ಆಶ್ರಯದಲ್ಲಿ ವಿಶ್ರಮಿಸುತ್ತಾ ತನ್ನ ಜೀವನ ಸಾಗಿಸಿತ್ತು. ತನ್ನ ಸಣ್ಣ ಪುಟ್ಟ ಸಾಹಸಗಳನ್ನು ನೆನೆಯತ್ತಾ ಮತ್ತೆ ಮೇಲೇರಲು ಯತ್ನಿಸುತ್ತಿತ್ತು.
ಕೆಲವೊಮ್ಮೆ ಕಗ್ಗತ್ತಲ ದಟ್ಟ ಕಾಡುಗಳನ್ನು ಹಾದು ಹೋಗುತ್ತಿತ್ತು. ಆಕಾಶಯಾನ ಬಹಳ ಹೆಚ್ಚಾದಾಗ ಇಂತಹ ಕಾಡಿನಲ್ಲಿ ವಾಸ. ಅಲ್ಲಿನ ಪರಿಸರವೇ ವಿಭಿನ್ನ. ಇತರ ಜಾತಿಯ ಹಕ್ಕಿಗಳು ತಮ್ಮ ಸ್ಥಳಕ್ಕೆ ಕಾಲಿಟ್ಟೊಡನೆಯೇ ದಾಳಿ ನಡೆಸುವಂತೆ ಮುಂದಾಗುತ್ತಿದ್ದವು. ಈ ನೀಲಿ ಹಕ್ಕಿಯ ಸ್ವಭಾವವನ್ನು ಅರಿತ ಮೇಲೆ ಬಂಧುವಂತೆ ನಡೆದುಕೊಳ್ಳುತ್ತಿದ್ದವು. ಕೆಲವು ಸಣ್ಣ ಹಕ್ಕಿಗಳು ನೀಲಿ ಹಕ್ಕಿ ಮಾಡುವ ಕುಶಲ ಪ್ರಯೋಗಗಳನ್ನು ಅನುಸರಿಸುತ್ತಿದ್ದವು. ಖಗ ಪ್ರಪಂಚದ ಸ್ವತಂತ್ರ ಪ್ರಜೆಯಾಗಿ ಮನಸ್ಸನ್ನು ಸ್ವಚ್ಛವಾಗಿರಿಸಿಕೊಂಡು ಮಿಕ್ಕ ಯಾವ ಹಕ್ಕಿಯ ಜೊತೆ ಅನವಶ್ಯಕ ಪೈಪೋಟಿ ನಡೆಸದೆ ಸುಂದರ ಲೋಕದ ಆನಂದವನ್ನು ಸವಿಯುತ್ತಿತ್ತು. ಸ್ವತಂತ್ರವಾಗಿ ಬದುಕುವುದು ಅಷ್ಟೇನು ಸುಲಭವಲ್ಲ ಎಂದು ಒಮ್ಮೊಮ್ಮೆ ತನಗನಿಸುತ್ತಿತ್ತು. ಆದರೆ ಆ ಸ್ವಾತಂತ್ಯದ ಅನುಭವಕ್ಕೆ ಸದಾ ಹಾತೊರೆಯುತ್ತಿತ್ತು. ಉಳಿದ ಹಕ್ಕಿಗಳ ವರ್ತನೆ ಅಷ್ಟೊಂದು ಸರಿಯಿಲ್ಲವೆಂದೆನಿಸಿದರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸ್ವಪ್ರಯತ್ನದಿಂದ ತನ್ನ ಗುರಿ ಸಾಧಿಸುವಕಡೆ ಹೋಗೋಣ ಎಂಬ ಮನಸ್ಥಿತಿ ಸದಾ ತಳೆಯುತ್ತಿತ್ತು.
ಒಮ್ಮೆ ಆ ಗಿಡುಗನಷ್ಟು ಮೇಲೆ ಹಾರಿ ಆ ಎತ್ತರವನ್ನು ಮುಟ್ಟಬೇಕೆನಿಸಿತು. ಏನೂ ಚಿಂತಿಸದೆ ಒಮ್ಮೆಲೆ ಎತ್ತರಕ್ಕೆ ಹಾರತೊಡಗಿತು. ರಭಸವಾದ ಗಾಳಿಯನ್ನು ಬೇಧಿಸಲು ಕಷ್ಟವಾಗುತಿತ್ತು. ರೆಕ್ಕೆಗಳಿಗೆ ತಡೆಯೊಡ್ಡಿದಂತಾಯಿತು, ಬಡಿಯಲು ಕಷ್ಟವಾಗಿತ್ತು. ಗಿಡುಗನಿಗಿದ್ದ ಚಾಕಚಕ್ಯತೆಗಳು ತನಗಿಲ್ಲವೆಂದು ಹಕ್ಕಿಗೆ ತಿಳಿದಿರಲಿಲ್ಲ. ಆದರೂ ಸಾಧನೆಯೇ ಧ್ಯೇಯವೆಂದು ಮುನ್ನುಗಿತು. ಗಾಳಿಯ ವೇಗ ತಳ್ಳಿಹಾಕಿತು. ತಕ್ಷಣವೇ ಕೆಳಗಿಳಿಯುವುದೇ ಸೂಕ್ತ ಎಂದು ಭಾವಿಸುವಷ್ಟರಲ್ಲಿ, ಅದರ ದಿಕ್ಕು ಕೆಳಮುಖವಾಗಿತ್ತು. ಅತಿ ವೇಗವಾಗಿ ಹಿಮ್ಮುಖವಾಗಿ ಭೂಮಿಯನ್ನು ಸ್ಪರ್ಷಿಸ ಬೇಕಾಯಿತು. ಬೀಳುವಾಗ ನದಿಯ ದಡದ ಕಲ್ಲುಬಂಡೆ ತನ್ನ ರೆಕ್ಕೆಯ ಪುಕ್ಕಗಳಿಗೆ ತಾಕಿತು. ಹಲವಾರು ರೆಕ್ಕೆಯ ಗರಿಗಳು ಗಾಳಿಯಲ್ಲಿ ಹಾರಿದವು. ಸ್ವಲ್ಪ ದಣಿವಾರಿಸಿಕೊಂಡು ಮತ್ತೆ ಹಾರುವ ಎಂಬ ಚಿಂತನೆಯಲ್ಲಿದ್ದಾಗ, ಅಲ್ಲೊಬ್ಬ ಬಂದಿದ್ದ. ಒಬ್ಬ ಸಣ್ಣ ಹುಡುಗ. ನೀಲಿ ರೆಕ್ಕೆಯ ಹಕ್ಕಿಗೆ ಆಕರ್ಷಿತನಾಗಿ ಅದನ್ನು ಮೆಲ್ಲಗೆ ಮುಟ್ಟಿದ. ಹಕ್ಕಿಗೆ ತಕ್ಷಣ ಹಾರಲಾಗಲಿಲ್ಲ. ನಡೆಯಲು ಪ್ರಾರಂಭಿಸಿತು. ಜೊತೆಗೆ ಭಯ ಬೇರೆ. ಹಾರಲು ಹೋದರೆ ಇನ್ನು ರೆಕ್ಕೆಗಳನ್ನು ಕಳೆದುಕೊಂಡರೆ ಎಂಬ ಭೀತಿ. ಅವನಿಗೇನು ಆ ಹಕ್ಕಿಯಿಂದ ಲಾಭವಿರಲಿಲ್ಲ. ಸುಮ್ಮನೆ ಹಿಡಿದುಕೊಂಡ. ಸಣ್ಣದೊಂದು ದಾರವನ್ನು ತಂದು ಅಲ್ಲೇ ಮರದ ಕೊಂಬೆಯನ್ನು ಮುರಿದ. ನದಿಯಂಚಿನಲ್ಲಿದ್ದದ್ದು ಉಸುಕು. ಆ ಉಸಿಕಿನಲ್ಲಿ ಆ ಕೊಂಬೆಯನ್ನು ಚುಚ್ಚಿದ. ದಾರಕ್ಕೆ ಹಕ್ಕಿಯ ಕಾಲನ್ನು ಕಟ್ಟಿದ. ಹಕ್ಕಿ ಈಗ ಕೇವಲ ಹೆಜ್ಜೆ ಹಾಕುವ ಹಕ್ಕಿಯಾಯಿತು. ಆ ಹುಡುಗ ಅಂತಹ ಕಟುಕನೇನು ಅಲ್ಲ. ಹಲವು ಕಾಳುಗಳನ್ನು ಹಕ್ಕಿಯ ಮುಂದೆ ಎರಚಿದ್ದ. ಅವನಿಗೇನೂ ಬೇಕಾಗಿರಲಿಲ್ಲ. ತನ್ನ ಕೆಲಸದಲ್ಲಿ ತಾನಿದ್ದ. ನದಿ ಅಷ್ಟೇನೂ ದೂರದಲ್ಲಿರಲಿಲ್ಲ. ಹಕ್ಕಿ ದಡದಿಂದ ಕೇವಲ ಇಪ್ಪತ್ತು ಅಡಿಯಷ್ಟು ದೂರದಲ್ಲಿತ್ತು. ನೀಲಿ ಹಕ್ಕಿಗೆ ನೀರು ಮುಟ್ಟುವ ಆಸೆ ಆದರೆ ನೀರಿನ ಸುಖವನ್ನು ಅನುಭವಿಸುವಂತಿಲ್ಲ. ಮೇಲೆ ಅದೆಷ್ಟೋ ಹಕ್ಕಿಗಳು ಹಾರುತ್ತಿವೆ ಆದರೆ ಅದಕ್ಕೀಗ ಒಂದು ಹೆಜ್ಜೆ ಹಾಕಲು ಭಯವಾಗುತಿತ್ತು. ಇನ್ನು ಹಾರುವ ಕನಸೆ? ಮುಂದೆ ನದಿಯಾಚೆ ದಟ್ಟವಾದ ಕಾಡುಕಾಣಿಸುತಿತ್ತು. ಆ ಕಾಡಿನಿಂದ ವಿಭಿನ್ನ ಹಕ್ಕಿಯ ಉಲಿ ಕೇಳಿ ಬರುತಿತ್ತು. ತನ್ನಂತೆ ನೀರನ್ನು ಸ್ಪರ್ಷಿಸಿ ಹಾರುವ ಹಕ್ಕಿಗಳು ಸ್ವಾತಂತ್ರದಿಂದ ಆನಂದವಾಗಿ ನೀರಿನ ಆ ತಿಳಿ ಸ್ನಾನವನ್ನು ಅನುಭವಿಸುತ್ತಿವೆ, ತನ್ನ ಸ್ಥಿತಿ ಹೀಗಾಯಿತಲ್ಲಾ ಎಂದು ಕೊರಗಿತು. ಎಡಗಡೆ ತಿರುಗಿದರೆ ವಿಶಾಲವಾದ ನದಿ, ಬಲಕ್ಕೆ ತಿರುಗಿದರೆ ಜುಳು ಜುಳು ನೀರು ಹರಿಯುತಿತ್ತು. ಎಲ್ಲವೂ ಸುಂದರ ಆದರೆ ಮನಸ್ಸಿನಲ್ಲಿ ತಲ್ಲಣ. ಅದು ಜನ ಬಂದು ಹೋಗುವ ತಾಣವಾಗಿತ್ತು. ಅಲ್ಲೊಂದು ಸಣ್ಣದೋಣಿ ನಿಂತಿತ್ತು. ದೋಣಿಯಲ್ಲಿ ಜನರಿದ್ದರು. ಹಿಂದೆತಿರುಗಿದರೆ ಒಬ್ಬಿಬ್ಬರು ಮಂದಿ ಬಂದು ಹೋಗುತ್ತಿದ್ದಾರೆ. ಎಲ್ಲರೂ ಒಮ್ಮೆಯಾದರೂ ಹಕ್ಕಿಯನ್ನು ನೋಡುತ್ತಿದ್ದರು. ಕೆಲವರು ಹಕ್ಕಿಯ ರೆಕ್ಕೆಯ ಬಣ್ಣದ ಬಗ್ಗೆ ಮಾತನಾಡಿದರೆ, ಮತ್ತೆ ಕೆಲವರು ಪಾಪ ಅನ್ನುವರೂ ಇದ್ದರು. ಹಲವರು ಕೆಲವು ಕಾಳುಗಳನ್ನು ಚೆಲ್ಲುತ್ತಿದ್ದರು. ತೀರಾ ಹಸಿವಾದಾಗ ಒಂದೆರಡು ಕಾಳು ತಿಂದು ನೀಲಿ ನಭವನ್ನು ನೋಡುತ್ತಾ ಹಕ್ಕಿ ಕಾಲ ಕಳೆಯುತಿತ್ತು.
ದಿನಗಳು ಕಳೆದವು. ನೀಲಿಹಕ್ಕಿಯ ಜೀವನವೇ ನಿಂತಂತಾಯಿತು. ಮನಸ್ಸಿನಲ್ಲಿ ಉದ್ವೇಗ, ಅಂತರಂಗದ ದುಗುಡವನ್ನು ಅರಿಯುವವರ್‍ಯಾರು. ಬಂದ ಮಂದಿ ಅಯ್ಯೋ ಎಂದಾಗ ಸ್ವಲ್ಪ ಸಾಂತ್ವನ ಸಿಕ್ಕಂತಾಗುತ್ತಿತ್ತು. ನದಿಯ ಸುತ್ತಣ ಸೌಂದರ್ಯವನ್ನು ನಿಂತಲ್ಲೇ ಅನುಭವಿಸಿ ಖುಷಿಯಾಗಿರಲು ಹಕ್ಕಿ ಯತ್ನಿಸುತ್ತಿತ್ತು.
ಹಕ್ಕಿಯಕತೆ ಇಲ್ಲಿಗೆ ಮುಗಿಯಲಿಲ್ಲ. ಗುರುಪ್ರೇರಣೆಯೋ ಎಂಬಂತೆ ಹಿಂದೊಮ್ಮೆ ಹಾರುವಾಗ ಇತರ ಹಕ್ಕಿಗಳಿಗೆ ಗುರುವಾಗಿದ್ದ ಕಡಲ ಹಕ್ಕಿ ಅಲ್ಲಿಗೆ ಬಂತು. ನೀಲಿ ಹಕ್ಕಿಯನ್ನು ಕಂಡು, ಇಲ್ಲೇನು ಮಾಡುತ್ತಿರುವೆ ಎಂದು ಕೇಳಿತು. ನಡೆಯಲು ಅಂಜಿದ ನೀಲಿಹಕ್ಕಿ ತನ್ನ ಶಕ್ತಿಯನ್ನೇ ಕಳೆದು ಕೊಂಡಿತ್ತು. ಗಂಟಲು ಒಣಗಿತ್ತು. ಉತ್ತರಿಸಲೂ ಭಯವಾಗಿತ್ತು. ಹತ್ತು ಹೆಜ್ಜೆ ಮುಂದೆ ನೀರಿನ ಕಡೆ ನಡೆ ಎಂದಿತು ಕಡಲ ಹಕ್ಕಿ. ಭಯ ಭಕ್ತಿಯಿಂದ ಹೆಜ್ಜೆ ಹಾಕತೊಡಗಿತು ನೀಲಿ ಹಕ್ಕಿ. ಕಟ್ಟಿದ್ದ ದಾರ ಹೆಚ್ಚು ಬಲವಾಗಿರಲಿಲ್ಲ. ನೀರು ಮುಟ್ಟುವತನಕ ಹಕ್ಕಿ ನಡೆಯಿತು. ಒಂದು ರೀತಿಯ ಉದ್ವೇಗ. ಆದರೂ ಗುರುವಿನ ಮಾತಿಗೆ ಗೌರವ. ನೀರು ಮುಟ್ಟುವ ತನಕ ನಡೆಯಿತು. ತನ್ನ ಕಾಲನ್ನು ಗಮನಿಸಿತು, ಆಶ್ಚರ್ಯವೆಂದರೆ ಕಾಲಿನಿಂದ ದಾರ ಕಳಚಿ ಹೋಗಿತ್ತ್ತು. ಆಗ ನೀಲಿ ಹಕ್ಕಿಗೆ ಆದ ಆನಂದದ ಅನುಭವ ಊಹೆಗೆ ನಿಲುಕದ್ದು. ಬಂಧನದಲ್ಲಿದಂತೆ ಭಾವಿಸಿ, ಭಯದ ಬಸಿರಿನಲಿ ಬೆಂದಿತ್ತು ನೀಲಿಹಕ್ಕಿ. ಹತ್ತು ಹೆಜ್ಜೆಗಳನ್ನು ನಡೆಯಬಲ್ಲೆನೆಂಬ ಧೈರ್ಯವೂ ಇರಲಿಲ್ಲ. ನಡೆಯುವ, ಹಾರುವ, ಜಿಗಿಯುವ, ನೀರನಲ್ಲಿ ಆಟವಾಡುವ ಕನಸಿದ್ದರೂ ಇದು ನಿಜವಾಗುವ ಸೂಚನೆಯಿಲ್ಲವೆಂದು ಭಾವಿಸಿತ್ತು. ದಾರ ಕಟ್ಟಿದ್ದ ಆ ಕೊಂಬೆಯೂ ಬಲವಾಗಿರಲಿಲ್ಲ, ದಾರವೂ ಸಡಿಲವಾಗಿತ್ತು. ಆದರೆ ನೀಲಿ ಹಕ್ಕಿಯ ಬಂಧನ ಭ್ರಮೆ ಮಾತ್ರ ಬಹಳ ಗಟ್ಟಿಯಾಗಿತ್ತು ಮನಸ್ಸಿನಾಳದಲ್ಲಿ ನಿಂತು ಹೋಗಿತ್ತು. ಪ್ರಯತ್ನಿಸುವ ಗೋಜಿಗೇ ಹೋಗಿರಲಿಲ್ಲ. ಇಲ್ಲದಿರುವ ಬಂಧನವನ್ನು ಇದೆಯೆಂದು, ಇರುವ ಸುಖವನ್ನು ಇಲ್ಲವೆಂದು ಭಾವಿಸಿ ಜೀವನವೆಲ್ಲಾ ಕೊರಗುವಂತಾದರೆ ತಾನು ಏನನ್ನು ಸಾಧಿಸಬಲ್ಲೆ ಎಂಬ ಆಲೋಚನೆ ಬಂತು. ಮನಸ್ಸಿನ ಕತ್ತಲೆಯಲ್ಲಿ ಇಂತಹ ಎಷ್ಟೋ ಭ್ರಮೆಗಳು ಸಹಜವೇನೋ, ಆದರೆ ಇದರ ಅರಿವು ಅತ್ಯಗತ್ಯ. ಇಂತಹ ಸತ್ಯವನ್ನು ಕಂಡುಕೊಳ್ಳುವ ಅವಕಾಶ ಕಳೆದು ಹೋದರೆ ಜೀವನದ ಅರ್ಥವೇನು? ಹೀಗೆ ಪ್ರಶ್ನೆಯ ಮೇಲೆ ಪ್ರಶ್ನೆ ಬಂತು. ಏನೆಲ್ಲಾ ಅನಿಸಿತು ಹಕ್ಕಿಗೆ. ಈಗ ಕಡಲಹಕ್ಕಿ ಹಾರುವ ಪಾಠ ಕಲಿಸಬೇಕೆ ಎಂದಿತು. ನೀಲಿ ಹಕ್ಕಿಯ ಅಂಧಕಾರದ ತೆರೆ ಕಳಚಿತ್ತು. ರೆಕ್ಕೆ ಬಿಚ್ಚಿ ನೋಡಿತು. ಯಾವ ವ್ಯತ್ಯಾಸವೂ ಇರಲಿಲ್ಲ. ತನ್ನ ಅಂತರಾತ್ಮದಲ್ಲಿ ಅಡಗಿರುವ ಶಕ್ತಿಯ ಗೋಚರವಾಯಿತು. ಭಯದ ಭ್ರಮೆ ಶಕ್ತಿಯನ್ನು ಮುಚ್ಚಿಬಿಟ್ಟಿತ್ತು. ಈಗ ಭ್ರಮೆಯಿಂದ ಬಿಡುಗಡೆಯಾಗಿದೆ. ಇನ್ನು ಬಂಧನವೆಲ್ಲಿ, ಆಕಾಶವೇ ತನ್ನದು, ನೀರೇ ತನ್ನದು, ಅನಂತವೇ ತನ್ನದೆಂಬ ಆನಂದ ಹಕ್ಕಿಯ ಆಂತರ್ಯವನ್ನು ತುಂಬಿತು.
ಮನಸಾ ನಾಗಭೂಷಣಂ
19-12-2018