ಚಳಿ
ಹೆಚ್ಚಾಗಿತ್ತು. ನಡೆಯಲೆಂದು
ಕ್ರೀಡಾಂಗಣಕ್ಕೆ ಹೋಗಿದ್ದ
ನಾನು ಓಡ ತೊಡಗಿದೆ.
ಮೈ ಕೈ ಒಂದು ರೀತಿ ಮರಗಟ್ಟಿತ್ತು. ದೇಹದ ತೂಕದ ಅರಿವು ಆಗಲೇ ಇಲ್ಲ. ಮನಸ್ಸು
ಬಹಳ ಹಗುರವಾಗಿತ್ತು. ಮುಖ ಅರಳಿ ನಗೆ ಅಂತರಾಳದಿಂದ ಹೊಮ್ಮುತ್ತಿತ್ತು. ಸುಮಾರು ಆರು
ಗಂಟೆ ಸಮಯ. ಅರ್ಧ ಬೆಳಕು. ಸೂರ್ಯ ಆಗ ತಾನೆ ಕತ್ತಲನ್ನು
ಸರಿಸಿ ಹೊರ ಬರುತ್ತಿದ್ದ. ಮರಗಳ ಮಧ್ಯೆ ಇಣುಕುತ್ತಿರುವ ಸುಂದರವಾದ ಸೂರ್ಯ ನನ್ನು ನೋಡಿದರೆ ಎದೆ ಇನ್ನಷ್ಟು ಹಿಗ್ಗಿತ್ತು. ಸೂರ್ಯನ
ಕಿರಣಗಳು ಎಲೆಗಳ ಮಧ್ಯೆ ಬೆಳಕಿನ ಚುಕ್ಕಿಗಳಂತೆ ತೋರುತ್ತಿದ್ದವು. ಬೆಳಕಿನ ಕಿರಣಗಳು ನನ್ನ ದೇಹವನ್ನು ಪ್ರವೇಶಿಸಿ ಕಣ್ಣುಗಳಿಂದ ಹೊಮ್ಮಿ ಕಣ್ಣುಗಳು
ಹೊಳೆಯುತ್ತಿದ್ದವು, ಮುವತ್ತೈದು
ನಿಮಿಷಗಳ ಕಾಲ ಕಾಲುಗಳು ವೇಗವಾಗಿ ಚಲಿಸಿದವು. ನೆಲದ ಮೇಲೆ ನಡೆಯುತ್ತಿದ್ದಂತೆ ತೋರಲಿಲ್ಲ. ನೆಲದಿಂದ ಹತ್ತು ಹದಿನೈದು ಅಡಿ ಮೇಲೆ ಹಾರಿದಂತಾಗತ್ತಿತ್ತು. ದೇಹ
ನೆಲದಲ್ಲಿ ಮನಸ್ಸು ಮೇಲೆ. ಅವರ್ಣನೀಯ ಅನುಭವ. ನಡಿಗೆಯನ್ನು ಮುಗಿಸಿ ಕೆಲ ಸಮಯ ಮೆಟ್ಟಿಲುಗಳ ಮೇಲೆ ಕುಳಿತೆ. ಕಣ್ಣು ಮುಚ್ಚಿದರೆ ದೇಹವೆಲ್ಲಾ ಬೆಳಕು. ಬಾನಿನ ಭಾಸ್ಕರನೇ ನನ್ನೊಳಗಿದ್ದಂತೆ ಭಾಸವಾಯಿತು. ಕಣ್ಣು
ತೆರೆದರೂ ಸೌಂದರ್ಯ, ಮುಚ್ಚಿದರೂ ಸೌಂದರ್ಯ. ಯಾವುದೇ
ಆಲೋಚನೆಗೆ ಅವಕಾಶವಿರಲಿಲ್ಲ. ದೇಹದ ನರ ನಾಡಿಗಳಲ್ಲಿ ಬೆಳಕಿನ
ಚಲನೆಯಾಗುತ್ತಿತ್ತು. ಇದೇ
ಆನಂದದ ಸ್ಥಿತಿ ಇರಬಹುದು ಎಂದೀಗ ಅನಿಸುತ್ತಿದೆ. ಕಣ್ಣು ಮುಚ್ಚಿದಾಗ ಎಲ್ಲೋ ಬೆಳಕಿನಲ್ಲಿ ಪ್ರಯಾಣ ನಡೆಸಿದಂತೆ ಇತ್ತು. ಅನಂತತೆಯ ಕಲ್ಪನೆ ಇದೆ ಇರಬಹುದು. ಆದನ್ನು
ಪದಗಳಲ್ಲಿ ಬಣ್ಣಿಸಲಾಗುವುದಿಲ್ಲ. ಎಂತಹ ಪದಗಳನ್ನು ಹಾಕಿದರೂ ಆ ಅನುಭವವನ್ನು ಹಂಚಿಕೊಳ್ಳಲಾಗುವುದಿಲ್ಲ. ಇದೇನು
ಹೇಳಿಕೊಳ್ಳುವಂತಹ ವಿಶೇಷವಾದ ಸಂಗತಿಯಲ್ಲ ಎಂದು ಎಲ್ಲರಿಗೂ ಅನಿಸಬಹುದು. ಇನ್ನೊಬ್ಬರಿಗೆ
ಹೇಗೆ ಅನುಭವಕ್ಕೆ
ಬರುತ್ತದೆ ಎಂದು ತಿಳಿಯದು. ನನಗಂತೂ
ಸಾಧಾರಣ ದಿನಗಳಂತೆ ಅನಿಸುತ್ತಿಲ್ಲ. ಬಹಳ ವಿಶೇಷವೆನಿಸುತ್ತಿದೆ. ಮನೆಗೆ
ಬಂದು ಕನ್ನಡಿಯಲ್ಲಿ ಮುಖ ನೋಡಿದಾಗ ಮುಖ ಹೊಳೆಯುತಿತ್ತು. ದಿನವಿಡೀ ಆ ಬೆಳಕಿನ ದರ್ಶನಕ್ಕೆ
ಅವಾಕ್ಕಾಗಿದ್ದೆ. ಇಡೀ
ದಿನ ಕ್ಷಣ ಕ್ಷಣದದ ರಸಾನುಭವದಲ್ಲಿ ಮಿಂದು ಹೋದೆ.
ಅನೇಕ
ಸಲ ನಾನು ಧ್ಯಾನಕ್ಕೆ ಕುಳಿತಾಗ ದೇಹದ ಪರಿವೇ ಇಲ್ಲದೆ ಎಲ್ಲೋ ತೇಲಿಹೋಗುತ್ತಿರುವ ಅನುಭವವಾಗುತ್ತದೆ. ಆದರೆ ಹೀಗೆ ಜಾಗೃತಾವಸ್ಥೆಯಲ್ಲಿ ಆದ ಆನಂದದ ಅನುಭವ
ಅವರ್ಣನೀಯ. ಇದೇ
ರೀತಿಯ ಅನುಭವ ಐದು ವರ್ಷಗಳ ಹಿಂದೆ ಆಗಿದ್ದರ
ನೆನಪಿದೆ, ಆದರೆ
ಆಗ ಬೆಳಕು ಕಾಣಿಸಿದ್ದು ಒಂದು ದೀರ್ಘ ಪ್ರಕ್ರಿಯೆಯ ನಂತರ. ಅಂದು ಬೆಳಗಿನ ಜಾವ ಸುಮಾರು ಐದು ಗಂಟೆಯಲ್ಲಿ ಅರ್ಧ ನಿದ್ರಾವಸ್ಥೆಯಲ್ಲಿದ್ದಾಗ ದೇಹಕ್ಕೆ ಕಟ್ಟಿದ್ದ ಸರಪಳಿಗಳೆಲ್ಲಾ ಬಿಡಿಸಿಕೊಂಡಂತಹ ಅನುಭವವಾಯಿತು, ದೇಹದ ಪ್ರತಿ ಭಾಗವೂ ಒಂದು ರೀತಿ ಬಂಧಮಕ್ತವಾದಂತೆ ಭಾಸವಾಯಿತು, ಪೂರ್ಣ ಎಚ್ಚರಗೊಂಡಾಗ ಕಣ್ಣ ಮುಂದೆ ಬಹು ದೊಡ್ಡ ಬೆಳಕು ಕಂಡೆ, ಆ ಬೆಳಕು ಸುಮಾರು
ಒಂದೂವರೆ ತಾಸು ಆನಂದದಲ್ಲಿ ತೇಲಿಸಿತ್ತು. ಅಂದು
ಇದೇ ರೀತಿ ಕ್ರೀಡಾಂಗಣಕ್ಕೆ ವ್ಯಾಯಾಮಕ್ಕೆಂದು ಹೋಗಿದ್ದೆ. ಹೇಳಲಾರದ ತಾಳಲಾರದ ಆನಂದದಲ್ಲಿ ಚಲಿಸುತ್ತಿರುವಂತಿತ್ತು. ಅದಾದ
ನಂತರ ನನ್ನಲ್ಲಿದ್ದ ಅನಿಶ್ಚಿತತೆ, ಅಭದ್ರತೆ, ಆಲಸ್ಯಗಳೆಲ್ಲಾ ದೂರವಾಗಿ ಹೊಸ ಜೀವನವನ್ನು ಪ್ರಾರಂಭಿಸಿದಂತೆ ಆಯಿತು. ಮನಸ್ಸು, ಮಾತು, ಕಾರ್ಯದಲ್ಲಿ ಉತ್ಸಾಹ
ಚಿಮ್ಮಿತ್ತು.
ನನ್ನ
ಪ್ರಕಾರ ಮನಸ್ಸಿನ ಧರ್ಮವೇ ಆನಂದ. ಚಿಂತೆ, ನೋವು, ತೊಂದರೆ, ಕಷ್ಟ, ಕಲ್ಮಶ ಇವುಗಳನ್ನು ನಾವು ಮಾಡಿಕೊಂಡಿದ್ದು. ಆದರೆ ವಿಧಿಯಿಲ್ಲ. ಸಂಬಂಧಗಳ ಹಾಗು ಸಂಸಾರದ ಏಳು ಬೀಳುಗಳಿಗೆ ಸ್ಪಂಧಿಸುವದು ಅವಶ್ಯಕ ಮತ್ತು ಸಮಾಜದ ಭಾಗವಾಗಿ ನಮ್ಮ ಕರ್ತವ್ಯ ಗಳನ್ನು ನಿರ್ವಹಿಸಿ ಹಲವಾರು ವಿಷಯಗಳಲ್ಲಿ
ಭಾಗವಹಿಸಲೇ ಬೇಕಾಗುತ್ತದೆ. ಜೀವನದ ಹರಿವಿನಲ್ಲಿ ನಾವು ತೇಲಿ ಹೋಗುತ್ತೇವೆ. ದುಃಖ, ಸಂತೋಷ, ನೋವು, ಅಸೂಯೆ, ಹಂಬಲ, ಆಸೆ ನಿರಾಸೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗೆ ಸ್ಥಿತಪ್ರಜ್ಞರಂತೆಯಾಗಲೀ, ಆನಂದಾವಸ್ಥೆಯಲ್ಲಾಗಲೀ ಇರುವುದು ಕಷ್ಟಸಾಧ್ಯ. ಆಗ
ತಾನೆ ಹುಟ್ಟಿದ ಮಗು ಹೇಗಿರಬಹುದು? ಮಗುವಿನ ಮನಸ್ಸು ಆನಂದದ
ಬೆಳಕಿನಲ್ಲಿರಬಹುದೇನೋ ತಿಳಿಯದು. ಆದರೆ ಸಂಸಾರಕ್ಕಿಳಿದ ನಂತರ ನಮಗಾಗುವ ಅನುಭವ ಕಲಿಕೆ ನಮ್ಮನ್ನು ಬೇರೊಂದು ದಿಕ್ಕಿನಲ್ಲಿ ಕರೆದೊಯ್ಯತ್ತದೆ. ಮತ್ತೆ ಆ ಮಗುವಿನ ಮನಸ್ಸು
ಪಡೆಯುವುದು ಸಾದುವಲ್ಲದ್ದು, ಹಾಗಾಗಿದ್ದರೆ ಅಪರಿಮಿತ ಆನಂದದಲ್ಲಿ ಜಗತ್ತೇ ಮುಳುಗಿರುತಿತ್ತು. ಈ
ಜಿಜ್ಞಾಸೆಗಳು ದೊಡ್ಡ ಜ್ಞಾನಿಗಳಿಗೆ ಬಿಟ್ಟಿದ್ದು. ನಾನು
ಅಂತಹ ಜ್ಞಾನಿಯೂ ಅಲ್ಲ, ದಾರ್ಶನಿಕಳೂ ಅಲ್ಲ ಸಂನ್ಯಾಸಿಯೂ ಅಲ್ಲ. ಎಲ್ಲರಂತೆ ಇಂತಹ ಜೀವನ ಪ್ರವಾಹದ ಹರಿವನಲ್ಲಿ ಸಿಲುಕಿದವಳು. ಆದರೆ ಇಂತಹ ಒಂದು ಅಪರೂಪದ ಅನುಭವವಾದದ್ದು ನಿಜ. ಅದಕ್ಕೆ ನಾನು ಧನ್ಯಳಾಗಿದ್ದೇನೆ. ಇದೇ
ಅನಂತ ಆನಂದದಲ್ಲಿ ಇರ ಬಯಸುತ್ತೇನೆ.
ಆದರೆ ನಮ್ಮ ಜೀವನ ಪಥ ಹೀಗೆ ಎಂದು
ಹೇಳಲಾಗುವುದಿಲ್ಲ. ದಿನನಿತ್ಯದ ಬವಣೆಗಳಲ್ಲಿ ಮತ್ತೆ ಮುಳುಗುತ್ತೇವೆ. ಮನಸ್ಸಿನ
ಆನಂದ ಧರ್ಮವನ್ನು ಮರೆಯುತ್ತೇವೆ. ಮರೆಯದ
ಅನುಭವ ಮತ್ತೆ ಮತ್ತೆ ಆಗಲಿ, ನಿರಂತರವಾಗಿರಲಿ ಎಂಬುದು
ನನ್ನ ಆಶಯ.
No comments:
Post a Comment